Online Desk
ಕನ್ನಡದ ಖ್ಯಾತ ನಟಿ ರಮ್ಯಾ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಸುಮಾರು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ರಮ್ಯಾ ಇದೀಗ ಡಾಲಿ ಧನಂಜಯ್ ಅಭಿನಯದ ಉತ್ತರಾಖಂಡ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ. ನಟನೆಯಿಂದ ದೂರವಿದ್ದರೂ ಸಾಮಾಜಿಕ ಮಾಧ್ಯಮಗಳೊಂದಿಗೆ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು. ಇಂದು (ನ. 29) ರಮ್ಯಾ ಅವರ ಜನ್ಮದಿನ.
ಅಭಿಮಾನಿಗಳ ಪಾಲಿಗೆ ಕನಸಿನ ಹುಡುಗಿಯಾಗಿರುವ ರಮ್ಯಾ ಅವರಿಗೆ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಚಿತ್ರರಂಗದಿಂದ ದೂರವಿದ್ದ ರಮ್ಯಾ ಆದಷ್ಟು ಬೇಗ ಹಿಂತಿರುಗಲಿ ಎಂಬುದೇ ಅಭಿಮಾನಿಗಳ ಆಸೆಯಾಗಿತ್ತು. ಅದು ರಾಜ್ ಬಿ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಕನಸಾಗುತ್ತಿದೆ ಎಂದು ಕಾಯ್ದಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಉಂಟಾಯಿತು. ಸಿನಿಮಾದಿಂದ ಹೊರನಡೆದಿದ್ದ ರಮ್ಯಾ ಅವರು, ಹೊಸ ಪ್ರತಿಭೆಗೆ ಅವಕಾಶ ಕೊಡಲಾಗಿದೆ ಎಂದಿದ್ದರು. ಆದರೆ, ರಮ್ಯಾ ಮತ್ತೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಅದುವೇ ಉತ್ತರಖಾಂಡ ಸಿನಿಮಾ.
ರಮ್ಯಾ ಅವರಿಗೆ ಅಭಿಮಾನಿಗಳಷ್ಟೇ ಅಲ್ಲದೆ ಸೆಲೆಬ್ರಿಟಿಗಳು ಕೂಡ ಶುಭ ಹಾರೈಸುತ್ತಿದ್ದಾರೆ.
ರಮ್ಯಾ ಅಭಿನಯದ ಮೊದಲ ಸಿನಿಮಾ ಅಭಿ. ಈ ಚಿತ್ರ 2003 ರಲ್ಲಿ ಬಿಡುಗಡೆಯಾಯಿತು. ಆಗ ರಮ್ಯಾ ಅವರಿಗೆ 21 ವರ್ಷ. ಈ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಅವಕಾಶಗಳು ರಮ್ಯಾ ಅವರನ್ನು ಅರಸಿ ಬಂದಿವೆ. ಅಭಿ ನಂತರ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ‘ಆಕಾಶ್’, ‘ಅರಸು’ ಸಿನಿಮಾ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಬಹುತೇಕ ಸ್ಟಾರ್ ನಟರೊಂದಿಗೆ ರಮ್ಯಾ ತೆರೆಹಂಚಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಅವಕಾಶಗಳಿರುವಾಗಲೇ ರಾಜಕೀಯಕ್ಕೆ ಕಾಲಿಟ್ಟ ರಮ್ಯಾ, ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾದರು. ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದ ಅವರು, ಚಿತ್ರರಂಗದಿಂದ ದೂರ ಉಳಿದಿದ್ದರು. ಅಂದಿನಿಂದ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿರಲಿಲ್ಲ.
ಮತ್ತೆ ಸಿನಿಮಾಗೆ ಯಾವಾಗ ಬರುವಿರಿ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದ ರಮ್ಯಾ, ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಕಮ್‌ಬ್ಯಾಕ್ ಮಾಡುವ ಆಸೆಯನ್ನು ಹೊಂದಿದ್ದರು. ಆದರೆ, ಅಪ್ಪು ಅವರ ಅಕಾಲಿಕ ನಿಧನದಿಂದ ರಮ್ಯಾ ಅವರ ಆಸೆ ಹಾಗೆಯೇ ಉಳಿಯುವಂತಾಯಿತು. ಅಪ್ಪು ಅವರ ಅಂತಿಮ ದರ್ಶನದ ವೇಳೆ ರಮ್ಯಾ ಈ ಬಗ್ಗೆ ಭಾವುಕರಾಗಿ ಮಾತನಾಡಿದ್ದರು.
ತಮ್ಮ ಕಮ್ ಬ್ಯಾಕ್ ಚಿತ್ರ ‘ಉತ್ತರಕಾಂಡ’ ಕುರಿತು ಮಾತನಾಡಿದ ನಟಿ ರಮ್ಯಾ ಅವರು, ‘ರತ್ನನ್ ಪ್ರಪಂಚ’ ಚಿತ್ರಕ್ಕೆ ನಾಯಕಿಯ ಪಾತ್ರವನ್ನು ನನಗೆ ಕೇಳಿದಾಗ ಕಾರಣಾಂತರಗಳಿಂದ ಅದನ್ನು ಒಪ್ಪಿಕೊಳ್ಳಲಾಗಿರಲಿಲ್ಲ. ನನಗೆ ಅತ್ಯಂತ ಆಪ್ತವಾದ ಸಿನಿಮಾ ರತ್ನನ್ ಪ್ರಪಂಚ. ಅಂತಹ ಒಳ್ಳೆಯ ತಂಡದ ಜೊತೆ ಕೈ ಜೋಡಿಸಲು ಖುಷಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ತಂಡದ ಜೊತೆಗಿನ ಒಡನಾಟ ಮತ್ತು ತಂಡದವರೆಲ್ಲರೂ ನನ್ನ ಮೇಲೆ ತೋರುತ್ತಿರುವ ಅಭಿಮಾನ ಒಳ್ಳೆಯ ಜಾಗದಲ್ಲಿರುವೆ ಎಂಬ ಭಾವನೆ ನೀಡುತ್ತಿದೆ ಎಂದು ರಮ್ಯಾ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಡಾಲಿ ಧನಂಜಯ್ ಮತ್ತು ರಮ್ಯಾ ಕಾಂಬಿನೇಷನ್‌ನಲ್ಲಿ ಉತ್ತರಖಾಂಡ ಸಿನಿಮಾ ಸಿದ್ಧವಾಗುತ್ತಿದೆ. ‘ಉತ್ತರಕಾಂಡ’ ಸಿನಿಮಾವನ್ನು ವಿಜಯ್ ಕಿರಗಂದೂರು ಅರ್ಪಿಸುತ್ತಿದ್ದು, ವಿಜಯ್ ಕಿರಗಂದೂರು ಹೊಂಬಾಳೆಯ ಅಂಗಸಂಸ್ಥೆ ಕೆ.ಆರ್.ಜಿ. ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. 2023ರಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗುತ್ತಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಇನ್ನು ರಮ್ಯಾ ಅವರಿಗೆ ಡಾಲಿ ಧನಂಜಯ್ ಸೇರಿದಂತೆ ಬಹುತೇಕ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ.
Happy birthday @divyaspandana pic.twitter.com/rJQwwxbJJC
— Pavan Wadeyar (@PavanWadeyar) November 29, 2022
Happy birthday to My well wisher @divyaspandana Let all your dreams come true ASAP Have a fantastic year ahead pic.twitter.com/WgPkRdAPJZ
— Santhosh Ananddram (@SanthoshAnand15) November 29, 2022
Happy Birthday @divyaspandana pic.twitter.com/Lp3lruNA4O
— Karthik Gowda (@Karthik1423) November 29, 2022