Express News Service
ಬೆಂಗಳೂರು: ತನ್ನ ಮದುವೆ ಪ್ರಸ್ತಾಪವನ್ನು ಒಪ್ಪಿಕೊಳ್ಳದ ಎರಡು ಮಕ್ಕಳ ತಾಯಿಯೊಬ್ಬರಿಗೆ ಇಂದಿರಾನಗರದ ಕದಿರಯ್ಯನ ಪಾಳ್ಯದ ಬಳಿ ಶುಕ್ರವಾರ ರಾತ್ರಿ ಆಕೆಯ ಮಾಜಿ ಪ್ರಿಯಕರ ಚಾಕುವಿನಿಂದ ಇರಿದಿದ್ದಾನೆ.
ಗಾಯಾಳುವನ್ನು ಕದಿರಯ್ಯನ ಪಾಳ್ಯದ ನಿವಾಸಿ ಅಮುದಾ (26) ಎಂದು ಗುರುತಿಸಲಾಗಿದ್ದು, ಆರೋಪಿ ಆಟೋ ಚಾಲಕ ಹಾಗೂ ಅಂಬೇಡ್ಕರ್ ನಗರದ ನಿವಾಸಿ ನವಾಜ್ ಎನ್ನಲಾಗಿದೆ. ಸದ್ಯ ಪೊಲೀಸರು ಆತ ಹಾಗೂ ಅವನ ಸಹಚರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಅಮುದಾ ಮತ್ತು ನವಾಜ್ ಸಂಬಂಧದಲ್ಲಿದ್ದರು. ಆದರೆ, ನವಾಜ್ ಬೇರೊಬ್ಬ ಮಹಿಳೆಯನ್ನು ವಿವಾಹವಾಗಿದ್ದ. ನಂತರ ಅಮುದಾ ಕೂಡ 2014 ರಲ್ಲಿ ಎಳುಮಲೈ ಅವರನ್ನು ವಿವಾಹವಾಗಿದ್ದರು. ಆಕೆ ತನ್ನ ಪತಿಯೊಂದಿಗೆ ಅಂಬೇಡ್ಕರ್ ನಗರದಲ್ಲಿ ವಾಸಿಸುತ್ತಿದ್ದರು. ಆದರೆ, ನವಾಜ್ ತನ್ನನ್ನು ಮದುವೆಯಾಗುವಂತೆ ಆಕೆಯನ್ನು ಪೀಡಿಸುತ್ತಿದ್ದನು. ಈ ವಿಷಯ ತಿಳಿದ ಏಳುಮಲೈ ತನ್ನ ಪತ್ನಿಯನ್ನು ತೊರೆದಿದ್ದರು. ಹೀಗಾಗಿ ಅಮುದಾ ಒಂದು ವರ್ಷದ ಹಿಂದೆ ಕದಿರಯ್ಯನ ಪಾಳ್ಯದಲ್ಲಿರುವ ತನ್ನ ತಾಯಿಯ ಮನೆಗೆ ಮರಳಿದ್ದಳು.
ಇದನ್ನೂ ಓದಿ: ಬೆಂಗಳೂರು: ತಂದೆ, ಮಲತಾಯಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿ ಚಾಕು ಇರಿತಕ್ಕೆ ಒಳಗಾದ ವಕೀಲ
ಆದರೂ, ನವಾಜ್ ಆಕೆಯನ್ನು ಹಿಂಬಾಲಿಸುತ್ತಲೇ ಇದ್ದ. ಶುಕ್ರವಾರ ರಾತ್ರಿ ಆತ ಮನೆಗೆ ಹೋಗಿ ಅಮುದಾ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಹೊರಗೆ ಬರುವಂತೆ ಬಾಗಿಲು ತಟ್ಟಿದ್ದಾನೆ. ಆದರೆ, ಅವರು ನಿರಾಕರಿಸಿದ್ದಾರೆ. ಸುಮಾರು ಒಂದು ಗಂಟೆಯ ನಂತರ, ಆಕೆ ತನ್ನ ಮಕ್ಕಳಿಗೆ ಚಿಪ್ಸ್ ತರಲು ಹೋದಾಗ ನವಾಜ್ ಆಕೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮುಖ, ಕುತ್ತಿಗೆ ಮತ್ತು ಬೆನ್ನಿಗೆ ಇರಿದು ಬೈಕ್‌ನಲ್ಲಿ ಸಹಚರನೊಂದಿಗೆ ಪರಾರಿಯಾಗಿದ್ದಾನೆ. ನಾವು ಕೊಲೆ ಯತ್ನ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ಮತ್ತು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.