The New Indian Express
ನವದೆಹಲಿ: ದೆಹಲಿ ಸಚಿವ ಸತ್ಯೇಂದ್ರ ಜೈನ್ ಗೆ ಸಂಬಂಧಪಟ್ಟ ಮತ್ತೊಂದು ಸಿಸಿಟಿವಿ ದೃಶ್ಯಾವಳಿಯ ವಿಡಿಯೊ ಹೊರಬಿದ್ದಿದೆ. ತಿಹಾರ್ ಜೈಲಿನಲ್ಲಿರುವ ಅವರು ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಸೇರಿದಂತೆ ಇನ್ನು ಕೆಲವರ ಜೊತೆ ಬೆಡ್ ಮೇಲೆ ಮಲಗಿಕೊಂಡು ಸಂಭಾಷಣೆ ನಡೆಸುತ್ತಿದ್ದಾರೆ.
ತಿಹಾರ್ ಜೈಲಿನೊಳಗೆ ಸತ್ಯೇಂದ್ರ ಜೈನ್ ಬೆಡ್ ಮೇಲೆ ಮಲಗಿಕೊಂಡಿದ್ದರೆ ಪಕ್ಕದಲ್ಲಿ ಕುರ್ಚಿ ಮೇಲೆ ಅಜಿತ್ ಕುಮಾರ್ ಕುಳಿತಿದ್ದಾರೆ. ಇಬ್ಬರೂ ಏನೋ ಮಾತುಕತೆ ನಡೆಸುತ್ತಿದ್ದಾರೆ. ಸಚಿವ ಸತ್ಯೇಂದ್ರ ಜೈನ್ ಅವರಿಗೆ ಜೈಲಿನೊಳಗೆ ವಿಶೇಷ ಆತಿಥ್ಯ ನೀಡಿದ ಆರೋಪದ ಮೇಲೆ ನವೆಂಬರ್ 14ರಂದು ಜೈಲಿನ ಸೂಪರಿಂಟೆಂಡೆಂಟ್ ಸ್ಥಾನದಿಂದ ವಜಾ ಮಾಡಲಾಗಿತ್ತು.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ವಿಡಿಯೊದಲ್ಲಿ ಜೈಲಿನ ಕೋಣೆಯೊಳಗೆ ಸತ್ಯೇಂದ್ರ ಜೈನ್ ಅವರು ಹಲವರ ಜೊತೆ ಸಂಭಾಷಣೆ ನಡೆಸುತ್ತಿದ್ದು ನಂತರ ಅವರು ಹೋದ ನಂತರ ಅಜಿತ್ ಕುಮಾರ್ ಪ್ರವೇಶವಾಗುತ್ತಾರೆ. ಬಿಜೆಪಿ ವಕ್ತಾರ ಶೆಹನಾಜ್ ಪೂನಾವಾಲ ಸಿಸಿಟಿವಿ ವಿಡಿಯೊ ದೃಶ್ಯಾವಳಿಗಳನ್ನು ಟ್ವೀಟ್ ಮಾಡಿ ಬಿಡುತ್ತಿದ್ದಾರೆ.
ಈ ಮಧ್ಯೆ, ಮೊನ್ನೆ ನವೆಂಬರ್ 23ರಂದು ದೆಹಲಿ ಕೋರ್ಟ್ ಮೊರೆ ಹೋದ ಸಚಿವ ಸತ್ಯೇಂದ್ರ ಜೈನ್ ಎಲ್ಲಾ ಮಾಧ್ಯಮಗಳು ತಮಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಕ್ಕೆ ತಡೆ ನೀಡುವಂತೆ ಕೋರಿದ್ದರು.
ಸಚಿವ ಸತ್ಯೇಂದ್ರ ಜೈನ್ ಕಳೆದ ಜೂನ್ ತಿಂಗಳಿನಿಂದ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಿಸಿ ತಿಹಾರ್ ಜೈಲಿನಲ್ಲಿದ್ದಾರೆ. ನವೆಂಬರ್ 16ರಂದು ದೆಹಲಿ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿದೆ.