The New Indian Express
ಉಡುಪಿ: ಕಳೆದ ವಾರ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ತರಗತಿಯಲ್ಲೇ ಮೊದಲ ವರ್ಷದ ಎಂಜಿನಿಯರಿಂಗ್ ಮುಸ್ಲಿಂ ವಿದ್ಯಾರ್ಥಿಯನ್ನು ಉಗ್ರ ಅಜ್ಮಲ್ ಕಸಬ್ ಗೆ ಹೋಲಿಸಿದ್ದ ಪ್ರಾಧ್ಯಾಪಕನನ್ನು ಸೋಮವಾರ ಅಮಾನತುಗೊಳಿಸಲಾಗಿದೆ.
ತರಗತಿಯಲ್ಲಿ ತನನ್ನು ಉಗ್ರ ಕಸಬ್ ಗೆ ಹೋಲಿಸಿದ ಪ್ರಾಧ್ಯಾಪಕರ ಹೇಳಿಕೆಗೆ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ. ಪ್ರಾಧ್ಯಾಪಕರ ಹೇಳಿಕೆಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನು ಓದಿ: ಉಡುಪಿ: ಶಾಲಾ ಕ್ರೀಡಾಕೂಟದಲ್ಲಿ ಆಜಾನ್’ಗೆ ನೃತ್ಯ ಮಾಡಿದ ವಿದ್ಯಾರ್ಥಿಗಳು, ವ್ಯಾಪಕ ಆಕ್ರೋಶ, ಪ್ರತಿಭಟನೆ
ಆದಾಗ್ಯೂ, ತರಗತಿಯ ನಂತರ ಪ್ರಾಧ್ಯಾಪಕರು ಆ ವಿದ್ಯಾರ್ಥಿಗೆ ಕ್ಷಮೆಯಾಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವೀಡಿಯೋದಲ್ಲಿ, ಗಲ್ಲಿಗೇರಿದ ಭಯೋತ್ಪಾದಕ-ಅಜ್ಮಲ್ ಕಸಬ್ ಗೆ ಹೋಲಿಸಿದ್ದಕ್ಕೆ ವಿದ್ಯಾರ್ಥಿಯು ಪ್ರೊಫೆಸರ್‌ನೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು.
ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಂದಿನ ವಿಚಾರಣೆ ಮುಗಿಯುವವರೆಗೆ ಪ್ರಾಧ್ಯಾಪಕರನ್ನು ಅಮಾನತು ಮಾಡಿದ್ದು, ಘಟನೆಯ ಕುರಿತು ಸಂಸ್ಥೆಯು ತನಿಖೆಯನ್ನು ಪ್ರಾರಂಭಿಸಿದೆ ಎಂದು ಮಣಿಪಾಲದ ಎಂಐಟಿಯ ಪ್ರಕಟಣೆ ತಿಳಿಸಿದೆ.
ಇಂತಹ ವರ್ತನೆಯನ್ನು ನಮ್ಮ ಕ್ಯಾಂಪಸ್‌ನಲ್ಲಿ ಸಹಿಸುವುದಿಲ್ಲ. ಧರ್ಮ, ಜಾತಿ, ಲಿಂಗ ಹಾಗೂ ಪ್ರಾದೇಶಿಕ ಬೇಧ ಮಾಡದೆ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕ್ಯಾಂಪಸ್ ನಮ್ಮದಾಗಿದೆ ಎಂದು ತಿಳಿಸಿದೆ.
ಪ್ರೊಫೆಸರ್ ವಿರುದ್ಧ ತನಿಖೆ ನಡೆಸಲು ಆಂತರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಘಟನೆಯನ್ನು ಖಂಡಿಸಿದ ಉಡುಪಿ ಜಿಲ್ಲಾ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್(ಎಸ್‌ಐಒ) ಅಧ್ಯಕ್ಷ ಅಫ್ವಾನ್ ಬಿ ಹೂಡೆ, ಕ್ಯಾಂಪಸ್ ಧಾರ್ಮಿಕ ಸೌಹಾರ್ದತೆಯನ್ನು ಸಾರುವ ಸ್ಥಳವಾಗಬೇಕೇ ಹೊರತು ಧರ್ಮಾಂಧತೆಯಲ್ಲ ಎಂದು ಹೇಳಿದ್ದಾರೆ.
ಧರ್ಮದ ವಿರುದ್ಧ ದ್ವೇಷವನ್ನು ಹರಡುವ ಪ್ರಾಧ್ಯಾಪಕರ ಮನಸ್ಥಿತಿ ಆತಂಕಕಾರಿ ಮತ್ತು ಸಂವಿಧಾನದ ಬುನಾದಿಯನ್ನು ಹಾಳು ಮಾಡುತ್ತದೆ. ಪ್ರಾಧ್ಯಾಪಕರ ಈ ರೀತಿಯ ವರ್ತನೆಯು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತ್ತಷ್ಟು ಭಯವನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.