Express News Service
ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಸೋಮವಾರ ಸಂಜೆ 32 ವರ್ಷದ ರಾಜಕೀಯ ಪಕ್ಷದ ಕಾರ್ಯಕರ್ತರೊಬ್ಬರು ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಮೃತರನ್ನು ಕಚೇರಿಪಾಳ್ಯ ನಿವಾಸಿ ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ. ತನ್ನ ರಾಜಕೀಯ ಬೆಳವಣಿಗೆಗೆ ಅಡ್ಡಿಪಡಿಸಲು ಯತ್ನಿಸಿದ್ದಕ್ಕೆ ಮಹಿಳೆ ಸೇರಿದಂತೆ ನಾಲ್ವರ ಹೆಸರನ್ನು ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ.
ವಿನೋದ್ ಕುಮಾರ್ ಹಲವಾರು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಮತ್ತು ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾಗಿದ್ದರಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ.
ಕುಮಾರ್ ಅವರ ಕುಟುಂಬದ ದೂರಿನ ಆಧಾರದ ಮೇಲೆ ಕೌನ್ಸಿಲರ್ ಮಂಜುನಾಥ್, ನಾರಾಯಣಪ್ಪ, ಧರ್ಮೇಶ್ ಮತ್ತು ಗುತ್ತಿಗೆದಾರರ ಪತ್ನಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಮಾರ್ ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಬಿಜೆಪಿಗೆ ತೆರಳಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದರ ಬೆನ್ನಲ್ಲೇ ಬಿಜೆಪಿ ಜತೆ ಇರಬೇಡಿ ಎಂದು ಕುಮಾರ್ ಅವರಿಗೆ ಮಂಜುನಾಥ್ ಕಿರುಕುಳ ನೀಡಲಾರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಮೃತದೇಹ ಹೊರತೆಗೆಯಲಾಯಿತು. ಕುಮಾರ್ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.